ಮಹೋದರ -		 	ಒಬ್ಬ ಮುನಿ. ಒಮ್ಮೆ ಈತ ಸ್ನಾನ ಮಾಡುತ್ತಿದ್ದಾಗ ನಾತದಿಂದ ಕೂಡಿದ ಒಬ್ಬ ರಾಕ್ಷಸನ ತಲೆ ಈತನ ಕಾಲಿಗೆ ಅಂಟಿಕೊಂಡಿತು. ಇದರಿಂದ ಖಿನ್ನನಾದ ಋಷಿ ಅನೇಕ ತೀರ್ಥಕ್ಷೇತ್ರಗಳನ್ನು ಸುತ್ತಿ ಕಡೆಗೆ ಔಶನಸ ತೀರ್ಥಕ್ಕೆ ಬಂದು ಅಲ್ಲಿ ಸ್ನಾನ ಮಾಡಿದಾಗ ಆ ರುಂಡ ಈತನ ಕಾಲಿನಿಂದ ಬೇರ್ಪಟ್ಟಿತು. ಅಂಟಿದ ರುಂಡವನ್ನು ಬೇರ್ಪಡಿಸಿದ ಆ ತೀರ್ಥಕ್ಕೆ ಕಪಾಲಮೋಚನ ಎಂಬ ಹೆಸರು ಬಂದಿತು. ಈ ತೀರ್ಥ ಸೇವಿಸುವವರು ಮತ್ತು ಇದರಲ್ಲಿ ಸ್ನಾನ ಮಾಡುವವರು ತಮ್ಮ ಪಾಪ ಕರ್ಮಗಳಿಂದ ಮುಕ್ತರಾಗುವರು ಎಂಬ ಪ್ರತೀತಿ ಇದೆ. ಈ ವೃತ್ತಾಂತ ಮಹಾಭಾರತದಲ್ಲಿ ಬಂದಿದೆ.

1. ಈತ ಸುಮಾಲಿಯೆಂಬ ರಕ್ಕಸನ ಮಗ. ರಾವಣನಿಗೆ ಸೋದರ ಮಾವ. ಸೀತಾನ್ವೇಷಣ ಕಾಲದಲ್ಲಿ ಲಂಕೆಗೆ ಹೋಗಿದ್ದ ಹನುಮಂತನಿಂದ ಹತನಾದ.

2. ಪುಲಸ್ತ್ಯಮುನಿ ಹಾಗೂ ಅವನ ಪತ್ನಿ ಪುಷ್ಪೋತ್ಕಣಿಯರ ಮಗ. ರಾವಣನಿಗೆ ಸಹೋದರ. ಮಂತ್ರಿ ಆಗಿದ್ದ. ರಾಮ ರಾವಣರ ಯುದ್ಧದಲ್ಲಿ ನೀಲನೆಂಬ ಕಪಿಯಿಂದ ಸತ್ತ.

3. ಧೃತರಾಷ್ಟ್ರನ ನೂರೊಂದು ಮಕ್ಕಳಲ್ಲಿ ಇವನೂ ಒಬ್ಬ. ಕೌರವಪಾಂಡವರ ಯುದ್ಧದಲ್ಲಿ ಭೀಮನಿಂದ ಹತನಾದ. 	  
		(ಕೆ.ಅರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ